Tuesday, March 12, 2013

ಬೀದರ ಜಿಲ್ಲೆ ಸಾಹಿತ್ಯ - ಸವಾಲುಗಳು

ಬೀದರ ಜಿಲ್ಲೆ ಸಾಹಿತ್ಯ - ಸವಾಲುಗಳು 


   
ಜಗತ್ಪ್ರಸಿದ್ಧ ಬಿದರಿ ಕಲೆ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ಬೀದರ ಕಲೆ, ಸಾಹಿತ್ಯ, ದೇಶಿ ಸಂಸ್ಕೃತಿಗೆ ತವರು ನೆಲ. ಐತಿಹಾಸಿಕವಾಗಿ ಕ್ರಿ.ಪೂ. 3ನೇ ಶತಮಾನದ ಮೌರ್ಯರ ಆಳ್ವಿಕೆಗೆ ಒಳಪಟ್ಟ ಬೀದರ ಬಹಮನಿ, ಕಲ್ಯಾಣ ಚಾಲುಕ್ಯರು, ಕಳಚುರಿಗಳು ಹೀಗೆ ಹಲವು ಅರಸು ಮನೆತನಗಳಿಗೆ ರಾಜಧಾನಿಯಾಗಿ ಮೆರೆದಿದೆ. ಜೈನ, ಬೌದ್ಧ, ವೈಷ್ಣವ, ಲಿಂಗಾಯತ, ಇಸ್ಲಾಂ, ಕ್ರೈಸ್ತ, ಸಿಖ್, ಇಸಾಯಿ, ಇರಾನಿ ಮೊದಲಾದ ಧರ್ಮದ ಅನುಯಾಯಿಗಳು ಸೌಹಾರ್ದಯುತವಾಗಿ ಇಲ್ಲಿ ಬಾಳುವೇ ಸಾಗಿಸುತ್ತಿದ್ದಾರೆ. ಇದರಿಂದ ಸಾಮಾಜಿಕ ಸಾಮರಸ್ಯ ನೆಲೆಸಿದಂತಾಗಿದೆ. ಸುಮಾರು ಎರಡು ಸಾವಿರ ವರ್ಷಕ್ಕೂ ಮೇಲ್ಪಟ್ಟ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಭಾರತೀಯ ಸಂದರ್ಭದಲ್ಲಿ ಸಂಸ್ಕೃತ ತಮಿಳನ್ನು ಬಿಟ್ಟರೆ ಅತ್ಯಂತ ಪ್ರಾಚೀನತೆ ಹೊಂದಿದೆ. ಹಾಗಾಗಿ ಜಾಗತಿಕ ಸಾಹಿತ್ಯದ ಸಾಲಿನಲ್ಲಿ ನಿಲ್ಲುವ ಸಾಮಥ್ರ್ಯ ಹೊಂದಿರುವ ಕನ್ನಡ ಸಾಹಿತ್ಯ ಸಂವರ್ಧನೆಯಲ್ಲಿ ಬೀದರ ಜಿಲ್ಲೆಯ ಪಾತ್ರ ಮಹತ್ವದು. ಆದರೆ ಪ್ರಸ್ತುತ ಸಂದರ್ಭದಲ್ಲಿ ಅದು ಹಲವಾರು ಸವಾಲುಗಳನ್ನು ಎದುರಿಸುವಂತಾಗಿದೆ.

    ಕನ್ನಡ ಮೊದಲ ಗದ್ಯಕೃತಿ ಬ್ರಾಜಿಷ್ಣು (ಶಿವಕೋಟಚಾರ್ಯ) ಬರೆದ ಕಣರ್ಾಟ ಆರಧಾನಾ ಟೀಕಾ (ವಡ್ಢಾರಾಧನೆ) ರಚನೆಯಾದದ್ದು ಈ ನೆಲದಲ್ಲಿಯೇ. ರನ್ನ (ಕಲ್ಯಾಣ ಚಾಳುಕ್ಯರ ಎರಡನೇ ತೈಲಪನ ಆಸ್ಥಾನ ಕವಿ) ಕಾವ್ಯ ಬರೆದದ್ದು, ಬಿಲ್ಹಣನ ವಿಕ್ರಮಾಂಕ ದೇವ ಚರಿತ ಬಂದದ್ದು ಈ ನಲೆದಲ್ಲಿಯೇ. ಮಿತಾಕ್ಷರ ಬರೆದ ವಿಜ್ಞಾನೇಶ್ವರ ಬೀದರ ಜಿಲ್ಲೆಯ ಮಾಸಿಮಡು ಗ್ರಾಮದವನು. ಹಾಗೆಯೇ ಆರನೇ ವಿಕ್ರಮಾದಿತ್ಯನ ಮಗ ಮೂರನೇ ಸೋಮೆಶ್ವರ ಬರೆದ ಮಾನಸೊಲ್ಲಾಸ ಅಭಿಲಾಷಿತಾರ್ಥ ಚಿಂತಾಮಣಿ ವಿಶ್ವಕೋಶ ಭಾರತೀಯ ಸಾಹಿತ್ಯ ಸಾಂಸ್ಕೃತಿಕ ಚರಿತ್ರೆಗೆ ಬಹುದೊಡ್ಡ ಕಾಣಿಕೆಗಳಾಗಿವೆ. ಅಲ್ಲದೇ ಅಂಕ ಗಣಿತದ ದೋಷ ಸರಿಪಡಿಸಲು ಬೀಜಗಣಿತ ನೀಡಿದವ ಬೀದರ ಮೂಲದ ಭಾಸ್ಕರನು ಉಜ್ಜೈನಿಯಲ್ಲಿ ನೆಲೆಸಿದನು. ಜೊತೆಗೆ ಜೀವಕಾರುಣ್ಯದ ಜನಪದ ಸಾಹಿತ್ಯ, ಅಧ್ಯಾತ್ಮಿಕ ಔನತ್ಯದ ತತ್ವಪದ, ವೈಚಾರಿಕತೆ ನೆಲೆಗಟ್ಟಿನ ವಚನ ಸಾಹಿತ್ಯ ಈ ನೆಲದ ಸಾಹಿತ್ಯಕ ಸತ್ವಗಳಾಗಿವೆ.

    ಹೀಗೆ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಬೀದರ ಕೊಡುಗೆ ಅಪಾರ. ಆದರೆ ಮಧ್ಯಕಾಲದ ಪರಕೀಯ ಆಳ್ವಿಕೆ ವಲಸೆ ಧರ್ಮಗಳ ವಿಚಾರ ಸಂಹಿತೆ ಈ ನೆಲದ ಸಂಸ್ಕೃತಿಯ ಮೇಲೆ ಅನ್ಯ ಪ್ರಭಾವ ಬೀರಿದ್ದು ಭಾಷಿಕ ಸಾಹಿತ್ಯಕ ಬಿಕ್ಕಟುಗಳ ಸೃಷ್ಠಿಯಾಗಲು ಕಾರಣವಾಯಿತು. ವಿಶೇಷವಾಗಿ ಬ್ರಿಟಿಷ್ ಆಳ್ವಿಕೆ ಹಾಗೂ ನಿಜಾಮ ಸಂಸ್ಥಾನದ ಪ್ರಭಾವದಿಂದ ಈ ಭಾಗದ ಜನರ ಬದುಕಲ್ಲಿ ಮಹತ್ತರ ಬದಲಾವಣೆಗಳು ಕಾಣಿಸಿಕೊಂಡವು. ಸ್ವಾತಂತ್ರ್ಯೋತ್ತರದಲ್ಲಿಯೂ ಆ ಕೊರತೆಯನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಹಾಗಂತ ಅಧುನಿಕ ಕನ್ನಡ ಸಾಹಿತ್ಯಕ್ಕೆ ಬೀದರ ಜಿಲ್ಲೆಯ ಕೊಡುಗೆ ಶೂನ್ಯವಾಗಿಯೂ ಇಲ್ಲ. ಇಲ್ಲಿಯೂ ಹಲವಾರು ಮಹತ್ವದ ಪ್ರತಿಭಿಗಳಿವೆ. ಆದರೆ ರಾಜಧಾನಿ ಕೇಂದ್ರಿತ ಸಾಂಸ್ಕೃತಿಕ ರಾಜಕಾರಣ, ಸಂಕುಚಿತ ಮನಸ್ಸಿನಿಂದಾಗಿ ಇವತ್ತಿಗೂ ಈ ನೆಲದ ಪ್ರತಿಭೆಗಳು ಕಡೆಗಣಿಸಲ್ಪಟ್ಟಿವೆ.

    17ನೇ ಶತಮಾನದಿಂದ ಕುವೆಂಪುವರೆಗಿನ ಕಾಲ ಸಾಹಿತ್ಯಕವಾಗಿ ಈ ಭಾಗ ಕತ್ತಲೆಯುಗವೆಂದು ಹೇಳುತ್ತಾರೆ. ಆದರೆ ವಾಸ್ತವ ಹಾಗಲ್ಲ. ಕುವೆಂಪು ಅಂತಹ ಮಹತ್ವದ ಕವಿಗೆ ಪಯರ್ಾಯವೆಂಬಂತೆ ಬೀದರ ನೆಲದಲ್ಲಿ ಡಾ|| ಜಯದೇವಿ ತಾಯಿ ಲಿಗಾಡೆ ಅವರಿಂದ ಶ್ರೀ ಸಿದ್ಧರಾಮೇಶ್ವರ ಪುರಾಣವೆಂಬ ಮಹಾಕಾವ್ಯ ಸೃಷ್ಟಿಯಾಯಿತು. (ಅನೇಕರು ಇದನ್ನು ಮಹಾಕಾವ್ಯವೆಂದು ಒಪ್ಪಿಕೊಳ್ಳುವ ಸೌಜನ್ಯ ಕೂಡ ತೋರಿಸಲಿಲ್ಲ) ಆ ಕಾಲಕ್ಕೆ ಕನ್ನಡ ಕಟ್ಟುವ ಸಾಹಿತ್ಯ ರಚಿಸುವ ಕೆಲಸಗಳು ನಮ್ಮಲ್ಲಿ ಅವ್ಯಾಹತವಾಗಿ ನಡೆದಿವೆ. ಪ್ರೊ. ವೀರೇಂದ್ರ ಸಿಂಪಿ, ದೇಶಾಂಸ ಹುಡುಗಿ, ಡಾ|| ಜಿ.ಬಿ. ವಿಸಾಜಿ, ಪಂಚಾಕ್ಷರಿ ಪುಣ್ಯಶೆಟ್ಟಿ ಮೊದಲಾದವರು ಉತ್ತಮ ಸಾಹಿತ್ಯ ರಚಿಸುತ್ತಲೇ ತಮ್ಮದೇ ಆದ ಸಾಹಿತಿಗಳ ಪಡೆಗಳನ್ನು ಕಟ್ಟಿ ಬೆಳೆಸಿರುವುದು ಇಲ್ಲಿನ ಸಾಹಿತ್ಯದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

    ಬೀದರದಲ್ಲಿಯು ಆಧುನಿಕ ಸಾಹಿತ್ಯದ ಬಹುತೇಕ ಎಲ್ಲ ರೂಪಗಳ ಕೃಷಿ ನಡೆದಿದೆ. ಅದರಲ್ಲಿ ದೇಶಾಂಸ ಹುಡುಗಿಯವರ ಬೀದರ ಕನ್ನಡ ಕೋಶ ಮಹತ್ವದ ಕೃತಿಯಾಗಿದ್ದು, ಗುರುನಾಥ ಅಕ್ಕಣ್ಣ, ಶಿವಕುಮಾರ ನಾಗವಾರ, ಕ್ಷಿತಿಜ ಮೊದಲಾದವರು ಮಹತ್ವದ ಕಥೆಗಾರರಾಗಿದ್ದಾರೆ. ಡಾ|| ಪ್ರೇಮಾ ಸಿಸರ್ೆ, ಎಂ.ಜಿ. ದೇಶಪಾಂಡೆ, ಎಮ್.ಜಿ. ಗಂಗನಪಳ್ಳಿ, ಹಂಶಕವಿ, ವಜ್ರಾ ಪಾಟೀಲ ಮೊದಲಾದವರು ಕಾವ್ಯದಲ್ಲಿ ಹೆಸರು ಮಾಡಿರುವಂತೆ ಡಾ|| ವೈಜಿನಾಥ ಭಂಡೆ, ಡಾ|| ಸೋಮನಾಥ ನುಚ್ಚಾ, ಡಾ|| ಸೋಮನಾಥ ಯಾಳವಾರ ಮೊದಲಾದವರು ಸಂಶೋಧನೆಯಲ್ಲಿ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ. ವ್ಯಾಕರಣದಲ್ಲಿ ಪಂಡಿತ ಬಸವರಾಜ ಕೆಲಸ ಮಾಡಿದಂತೆ ಶಂಭುಲಿಂಗ ವಾಲ್ದೊಡ್ಡಿಯವರ ವ್ಯಾಕರಣ ಕೃತಿ ಚಾರಿತ್ರಿಕವಾಗಿ ಮಹತ್ವದು.

ಹೊಸ ತಲೆಮಾರಿನ ಲೇಖಕರಲ್ಲಿ ರುಕ್ಮೋದ್ದಿನ್ ಇಸ್ಲಾಂಪೂರ ಡಾ.ಶಿವಗಂಗಾ ರುಮ್ಮಾ, ಡಾ. ವಿಕ್ರಮ ವಿಸಾಜಿ, ಡಾ. ಇಂದುಮತಿ ಪಾಟೀಲ, ಡಾ. ಗವಿಸಿದ್ಧ ಪಾಟೀಲ, ಡಾ. ರಘುಶಂಖ ಭಾತಂಬ್ರಾ, ಎಮ್.ಎಸ್. ಮನೋಹರ, ಶಿವಕುಮಾರ ಕಟ್ಟೆ, ರಮೇಶ ಬಿರಾದಾರ ಮೊದಲಾದವರು ಭರವಸೆಯ ಬರಹಗಾರರಾಗಿದ್ದಾರೆ.

    ಕಾವ್ಯದಲ್ಲಿ ಮಹೇಶ್ವರಿ ಶಿವಲಿಂಗ ಹೇಡೆ, ಮುಕ್ತಂಬಿ, ಜಯದೇವಿ ಗಾಯಕವಾಡ, ಬಸವರಾಜ ಮಯೂರ, ಭಾರತಿ ವಸ್ತ್ರದ ಮೊದಲಾದವರನ್ನು ಹೆಸರಿಸಬಹುದು. ವಿಚಾರ ಸಾಹಿತ್ಯದಲ್ಲಿ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಮಕ್ಕಳ ಸಾಹಿತ್ಯದಲ್ಲಿ ಚಂದ್ರಪ್ಪಾ ಹೆಬ್ಬಾಳಕರ, ರಂಗ ಭೂಮಿಯಲ್ಲಿ ಚಂದ್ರಗುಪ್ತ ಚಾಂದಕವಠೆ, ವಿಜ್ಞಾನ ಸಾಹಿತ್ಯದಲ್ಲಿ. ಎಸ್.ವ್ಹಿ.ಕಲ್ಮಠ, ಸುಭಾಷ ನೆಳಗೆ ಪ್ರಬುದ್ಧ ಸಾಹಿತ್ಯ ರಚಿಸಿ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿಯೇ ಮಹತ್ವದ ಲೇಖಕರಾಗಿದ್ದ ಮ.ಮಾ. ಬೋರಾಳಕರ್, ಕೆರಳ್ಳಿ ಲಕ್ಷ್ಮಾರಡ್ಡಿ, ಶ್ರೀಕಾಂತ ಪಾಟೀಲ, ಯಶೋದಮ್ಮಾ ಸಿದ್ಧಬಟ್ಟೆ ಅವರನ್ನು ಕಳೆದುಕೊಂಡಿದ್ದು ಒಂದಿಷ್ಟು ನೋವಿದೆ.

    ಗಮನಾರ್ಹ ಸಂಗತಿ ಎಂದರೆ ನಮ್ಮಲ್ಲಿ ವಿಮರ್ಶ ಸಾಹಿತ್ಯದ ಬಹುದೊಡ್ಡ ಕೊರತೆ ಎದ್ದು ಕಾಣುತ್ತಿದೆ. ಮುಖ್ಯವಾಗಿ ಹೊಸ ಬರಹಗಾರರಿಗೆ ಬೆನ್ನುತಟ್ಟುವ ಔದಾರ್ಯದ ಕೊರತೆ ಒಂದೆಡೆಯಾದರೆ, ಇನ್ನೊಂದಡೆ ಯಾರಾದರೂ ನೀ ಇನ್ನು ಸರಿಯಾಗಿ ಬರೆಯಬೇಕು ಎಂದು ಹೇಳಿದಾಗ ಅದನ್ನು ವಿಶಾಲ ಹೃದಯವಂತಿಕೆಯಿಂದ ಸ್ವೀಕರಿಸುವ ಔದಾರ್ಯದ ಗುಣಗಳು ನಮ್ಮಲ್ಲಿ ಸಿಗುತ್ತಿಲ್ಲ. ಸಾಹಿತ್ಯ ಮತ್ತು ಸಂಸ್ಕೃತಿ ಒಂದು ನಾಡಿನ ಸರ್ವತೋಮುಖವಾದ ಬೆಳವಣಿಗೆಗೆ ಕಾರಣವಾಗುವಾಗ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಸಾಂಸ್ಕೃತಿಕವಾಗಿ ಭಾವೈಕತೆಯ ಸಂಬಂಧ ಎಲ್ಲರೂ ಒಟ್ಟಾಗಿ ಬೆರೆಯಬೇಕೆಂಬ ಮನೋಭಾವನೆಯಿಂದ ದೂರ ಸರಿಯುತ್ತಿರುವುದು ಮತ್ತು ತಮ್ಮ ವಿಚಾರದಂತೆ ಪರರ ವಿಚಾರವು ಶ್ರೇಷ್ಠವೆಂಬ ಸಹೃದಯತೆ ಕಳೆದುಕೊಂಡಿರುವುದು ದೊಡ್ಡವರ ಸಣ್ಣತನಗಳಾಗಿವೆ.

ಈ ಎಲ್ಲಾ ಕಾರಣಗಳಿಂದಾಗಿ ಹೇಳಿಕೊಳ್ಳುವಂತಹ ಭರವಸೆಗಳಿಲ್ಲದ ಬಿಕ್ಕಟ್ಟು ಸೃಷ್ಠಿಯಾಗುತ್ತಿದೆ. ಇದಕ್ಕೆ ಜೀವನಾನುಭವದ, ಓದಿನ ಕೊರತೆ ಎದ್ದು ಕಾಣುತ್ತಿದೆ. ನಮ್ಮ ನಮ್ಮ ಮಧ್ಯ ಅರಿವನ್ನು ಹಂಚಿಕೊಳ್ಳುವ ಆಲೋಚನೆ ಇಲ್ಲ. ಹಾಗಂತ ಇಲ್ಲಿ ಕತ್ತಲೆಂದು ಇಲ್ಲ. ಹೊಸದರ ನಿರೀಕ್ಷೆಯಲ್ಲಿರಬೇಕಾಗಿದೆ. ಅದಕ್ಕೆ ಬೇಕಾಗುವ ಸಿದ್ಧತೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ನಮ್ಮ ಯುವಕರು ಬರವಣಿಗೆ ಫ್ಯಾಶನ್ನಿನ ಸರಕಾಗಿ, ವೇದಿಕೆಯ ಸಾಧನವಾಗಿ ಮಾತ್ರ ಬೆಳೆಯದೇ ಬರಹದ ಮೂಲಕ ಬದುಕನ್ನು ಕಟ್ಟಬೇಕಾಗಿದೆ.

    ಸಾಹಿತ್ಯ ನಮ್ಮಲ್ಲಿ ತಲ್ಲಣವುಂಟು ಮಾಡದಿದ್ದರೆ ಅದು ಸಾಹಿತ್ಯವಲ್ಲ. ಚಿಂತನೆಗೆ ಹಚ್ಚುವ ಸಾಹಿತ್ಯ ಸೃಷ್ಠಿಯಾಗಬೇಕು. ಸಾಹಿತ್ಯವೆಂದರೆ ಕೇವಲ ಕವಿತೆ ಮಾತ್ರ ಅಲ್ಲ. ಸೃಜನಶೀಲ ಕಾವ್ಯ ಓದುವ ಕಾಲದಿಂದ ದೂರ ಬರುತ್ತಿದ್ದೇವೆ. ಅದು ಕಲೆ ಕಲೆಗಾಗಿ ಎಂಬ ನಿಲುವಿನದು. ಕಲೆ ಸಮಾಜಕ್ಕಾಗಿ, ಕಲೆ ಬದುಕಿಗಾಗಿ ಎಂಬ ನಿಲುವಿನ ಮೂಲಕ ಯೋಚಿಸಬೇಕಾಗಿದೆ. ಅನುವಾದವೂ ಒಂದು ಸಾಹಿತ್ಯ, ಸಂಗೀತ ಮಾಹಿತಿ ತಂತ್ರಜ್ಞಾನ, ಸಾಫ್ಟವೇರ್, ಎಲ್ಲವೂ ಕನ್ನಡದಲ್ಲಿ ತರಬೇಕು. ಕನ್ನಡ ಹೇಳಿಕೊಳ್ಳುವಷ್ಟು ಆತಂಕದ ಸ್ಥಿತಿಯಲ್ಲಿಲ್ಲ. ಹೊಸ ತಂತ್ರಜ್ಞಾನದ ಸ್ಪರ್ಶದಿಂದ ಹೊಸ ಕನ್ನಡಲೋಕ ತೆರೆದುಕೊಂಡಿದೆ. ಕನ್ನಡದ ಮೂಲಕ ವಿಶ್ವದ ಜ್ಞಾನ ಸಂಪಾದಿಸುವ ಕಾಲದಲ್ಲಿದ್ದೇವೆ. ದಿನಕ್ಕೆ ಹತ್ತರಂತೆ, ವರ್ಷಕ್ಕೆ ಸು.3500 ಪುಸ್ತಕ ಪ್ರಕಟವಾಗುತ್ತಿವೆ. ಹಿಂದಿಗಿಂತಲೂ ಇಂದು ಹೆಚ್ಚು ದಾರಿ ತೆರೆದುಕೊಂಡಿವೆ. ಇದೆಲ್ಲವನ್ನು ನಮ್ಮ ಜಿಲ್ಲೆಯ ಲೇಖಕರು ಸಹಸ್ಪಂದಿಸಬೇಕು. ಅಂದಾಗ ಕನ್ನಡ ಬದುಕು ಮತ್ತು ಸಾಹಿತ್ಯ ಜೊತೆಯಾಗಿಯೇ ಬೆಳೆಯುತ್ತದೆ. (ವಿ.ಸೂ.ಇಲ್ಲಿನ ಲೇಖಕರ ಹೆಸರು ಕೇವಲ ಪ್ರಾತಿನಿಧಿಕ ಮಾತ್ರ ಪರಿಪೂರ್ಣ ಅಲ್ಲ.)

ಡಾ. ಬಸವರಾಜ ಬಲ್ಲೂರ, ಬೀದರ
ಮೊಃ 09738418468, 9242440379

No comments:

Post a Comment