Thursday, March 28, 2013

ವಚನ v/s ವಚನ ರಚನೆ


ವಚನ v/s ವಚನ ರಚನೆ
ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯ
ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರೀಯ ಯಾಗ ಸಮಬಾರದಯ್ಯ
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮಬಾರದಯ್ಯ
ಕಪಿಲಸಿದ್ದಮಲ್ಲಿಕಾಜರ್ುನಯ್ಯ
    - ಸಿದ್ದರಾಮ
ವಚನ ಸಾಹಿತ್ಯದ ಮಹತ್ವ ಸಾರುವ ಈ ವಚನ ಅತ್ಯಂತ ಮಹತ್ವದ್ದು. ವಚನ ಎನ್ನುವುದು ಪಂಪ ಚಂಪೂಕಾವ್ಯವನ್ನು ಬರೆಯುವಾಗ ಗದ್ಯವೆನ್ನುವ ಅರ್ಥಸೂಚಕವಾಗಿ ಈ ಪದವನ್ನು ಬಳಸಿದ. ಮುಂದೆ ಚಂಪೂವಿಗೆ ವಿರುದ್ಧವಾಗಿ ವಚನವೆಂಬ ರೂಪವನ್ನು ಬಸವಾದಿ ಶರಣರು ರೂಢಿಗೆ ತಂದರು.
ಕನ್ನಡ ಸಾಹಿತ್ಯದ ಸುವರ್ಣಯುಗವೆಂದು ಕರೆಯಲ್ಪಡುವ 10ನೇ ಶತಮಾನದ ಸಾಹಿತ್ಯ ಮಾರ್ಗ ದೇಶೀಯ ಸಮನ್ವಯ, ಲೌಕಿಕ, ಆಗಮಿಕಗಳ ಧೋರಣೆ ಪಾಠ್ಯ ಗೇಯದ ಮಾದರಿ ಪ್ರಭು ಸಮ್ಮುಖ ಜನ ಸಮ್ಮುಖದ ನಿಲುವುಗಳೆಲ್ಲ ಮುರಿದು ಜನ ಸಾಮಾನ್ಯರು (ಶರಣರು) ಜನ ಸಾಮಾನ್ಯರಿಗಾಗಿ (ಶರಣರಿಗಾಗಿ) ಜನ ಸಾಮಾನ್ಯರೇ (ಶರಣರೇ) ಬರೆದಿದ್ದು ವಚನವೆಂಬ ರೂಪ ತಾಳಿತ್ತು. ಆದರೆ ವಚನ ಕೇವಲ ಒಂದು ಸಾಹಿತ್ಯ ರೂಪವಾಗಿ ಬರೆಯದೇ ಜೀವನ ವಿಧಾನವಾಗಿ ಬರೆದದ್ದು ಚಳುವಳಿಯ ಅಂತಃಸತ್ವವಾಗಿ ರೂಪತಳೆದಿದ್ದು, ಸತ್ಯ ಶುದ್ಧವಾದ ಬದುಕು ಕಟ್ಟಲು ನೆರವಾದುದ್ದು ವಚನ. ಅಂದರೆ ನಡೆ ನುಡಿ ಒಂದಾದ ಅನುಭಾವದ ನುಡಿಗಳೇ ವಚನ. ಹಾಗಾಗಿ ಶರಣರು ಬರೆದದ್ದು ಮಾತ್ರ ವಚನ ಎಂದು ಕರೆಸಿಕೊಳ್ಳುತ್ತದೆ. ವಚನ ಎಂದರೆ ಹುಸಿ ಹೊದ್ದದ ನುಡಿಗಳು ಎಂದರ್ಥ. ಇದು ಮಾತು ಮೀರಿದ ನಡೆ ಪೂರೈಸಿದ ನಿಲುವಾಗಿದೆ. ವಚನ ಎಂಬ ಮೂರಕ್ಷರಗಳು ವ - ವಾಚನ (ಮಾತು) ಚ - ಚಲನೆ (ನಡೆ) ನ - ನಯನ (ನೋಟ) ಸಾತ್ವಿಕ ನಡೆನುಡಿನೋಟಗಳ ಸಂಗಮವೇ ವಚನ.
ವಚನವೆಂದರೆ ( ಬಸವಪಥ, ಬಸವಜಯಂತಿ ವಿಶೇಷ ಸಂಚಿಕೆಯಲ್ಲಿ )ಹೀಗೆ ಅರ್ಥವಿದೆ.
ವ್ಯಾಖ್ಯಾನ (ಭಾವಾಂಗಳು),
ಧರ್ಮ (ವಚನ ಧರ್ಮಸಾರ),
 ಶಾಸ್ತ್ರ (ವಚನ ಶಾಸ್ತ್ರ ರಹಸ್ಯ),
ಅನುಭಾವ,
ರೂಪ (ಈಠಡಿಟ) (ವಚನ, ಗದ್ಯ, ಪದ್ಯ, ತ್ರಿಪದಿ, ಶಾಸನ,)
ವಚನ (ಚಂಪೂ, ಯಕ್ಷಗಾನ, ಬಯಲಾಟ, ಬಿಡಿ ಮುಕ್ತಕ)
 ಭಾಷೆ (ಮಾತುಕೊಡು),
ಸೂಳ್ನುಡಿ,
 ಗೀತೆ (ಶಿವದಾಸ ಗೀತಾಂಜಲಿ),
 ತ್ರಿಪದಿ,
ಗದ್ಯಸ್ತ್ರೋತ್ರ,
 ಚಳುವಳಿ,
ಮುಕ್ತ ಭಾವ (ಮುಕ್ತಕ),
ಕನ್ನಡ ಉಪನಿಷತ್ತು,
 ಆತ್ಮತೃಪ್ತಿ,
ಶುದ್ಧ ನಡೆಯವನ ನೇರ ನುಡಿ,
ನಡೆ-ನುಡಿ ಏಕಗೊಳಿಸಿಕೊಂಡವನ ಬದುಕು,
 ಸತ್ಯಶುದ್ಧ ಕಾಯಕ ಜೀವಿಗಳ ಅಭಿವ್ಯಕ್ತಿ.
 ಹೀಗೆ ವಚನ ಎನ್ನುವುದಕ್ಕೆ ವಿಶೇಷ ಅರ್ಥಗಳಿವೆ. ಆದ್ದರಿಂದ ಶರಣರು ಬರೆದದ್ದು ಮಾತ್ರ ವಚನವಾಗುತ್ತದೆ ಉಳಿದವು ವಚನ ರಚನೆಯಾಗುತ್ತವೆ.
ಅಂಕಿತ
ವಚನ ಸಾಹಿತ್ಯದ ವಿಶೇಷತೆಯೆಂದರೆ ಬಸವಾದಿ ಶರಣರು ಬಳಸಿದ ವಚನಾಂಕಿತಗಳು. ಕೇವಲ ಹೆಸರಿನ ರೂಪವಾಗದೆ ಬರೆದವರ ಆತ್ಮ ಸಂಗಾತಿಗಳಾಗಿವೆ. ಆತ್ಮ ನಿವೇದನೆಗೆ ಸಾಧನಗಳಾಗಿವೆ. ಅಭಿವ್ಯಕ್ತಿಯ ಮಾಧ್ಯಮವಾಗಿವೆ. ವಚನಾಂಕಿತಗಳು ಸ್ಥಾವರವಲ್ಲ. ವಸ್ತು ಚೈತನ್ಯದ ಸಮನ್ವಯ. ವ್ಯಷ್ಟಿ ಸಮಷ್ಟಿಯ ಪ್ರತೀಕ.
ವಚನ ಪರಂಪರೆ
ವಚನ ಸಾಹಿತ್ಯವು ಅಪೂರ್ವಸಾಹಿತ್ಯ ರೂಪ. ರಾಜಪ್ರಭುತ್ವದ ಯಜಮಾನ್ಯ ವ್ಯವಸ್ಥೆಯಲ್ಲಿ ದೇವರು, ಧರ್ಮ, ಸಾಹಿತ್ಯಗಳಿಂದ ಹೊರಗುಳಿದ ಜನ ಸಾಮಾನ್ಯರು ವಚನಗಳ ಮೂಲಕ ದೇವರ ವಾದ ಪ್ರಶ್ನಿಸುವ ಮನು ಪ್ರಣಿತವಾದ ಧರ್ಮವನ್ನು ನಿರಾಕರಿಸುವ ಜೀವನಮೂಲ ಆಧಾರಿತ ಸಾಹಿತ್ಯವನ್ನು ರಚಿಸುವ ಮೂಲಕ ಒಂದು ಪರಿಪೂರ್ಣ ಸಾಹಿತ್ಯ ರೂಪಕೊಟ್ಟರು. (ವಚನಗಳು ಗದ್ಯವು ಹೌದು, ಪದ್ಯವು ಹೌದು, ಶಾಸ್ತ್ರವು ಹೌದು, ಸಾಹಿತ್ಯವು ಹೌದು) ಇಂತಹ ಸಾಹಿತ್ಯವನ್ನು ಬಸವಪೂರ್ವ ಯುಗ, ಬಸವ ಯುಗ, ಬಸವೋತ್ತರ ಯುಗ ಮತ್ತು ಆಧುನಿಕ ಯುಗವೆಂದು ಕರೆವ ವಾಡಿಕೆ  ಬೆಳೆದಿದೆ. ವಾಸ್ತವವಾಗಿ ಬಸವಪೂರ್ವ ಯುಗವೆಂದರೆ ಬಸವಣ್ಣನವರ ಹಿರಿಯ ಸಮಕಾಲೀನರ ಕಾಲ. (ದಾಸಿಮಯ್ಯ ಇತ್ಯಾದಿ) ಬಸವ ಯುಗ ವಚನ ಸಾಹಿತ್ಯದ ಸಮೃದ್ಧಿಯ ಕಾಲ. ಬಸವೋತ್ತರ ಯುಗ ವಚನ ಸಾಹಿತ್ಯದ ಸಂಗ್ರಹ, ಸಂಕಲನದ ಯುಗ. ಆಧುನಿಕ ಯುಗ ವಚನ ಸಾಹಿತ್ಯದ ಅಧ್ಯಯನದ ಯುಗ ಅಥವಾ ಪ್ರಭಾವಿತ ಯುಗ. ವಚನಗಳು ಸಂಸ್ಕೃತಕ್ಕೆ ಪಯರ್ಾಯವಾಗಿ ಹುಟ್ಟಿಕೊಂಡಿದ್ದು ಸರಳ ನಿರೂಪಣೆಗೆ ಒಳಗಾಗಿದ್ದರಿಂದ ಬಹುಕಾಲದವರೆಗೆ ಜನಮಾನಸದಲ್ಲಿ ಬೇರೂರಿದೆ ನಿಜ ಆದರೆ ಆ ಮಾದರಿಯ ವಚನಗಳು ವಚನಗಳಾಗುವುದಿಲ್ಲ, ವಚನ ರಚನೆಗಳಾಗುತ್ತವೆ.
ಮುಖ್ಯ ಕಾರಣಗಳೆಂದರೆ :
* ವಚನಕಾರರು ನಡೆ-ನುಡಿ ಒಂದಾಗಿದ್ದ ಸತ್ಯ ಶುದ್ಧ ಕಾಯಕ ಜೀವಿಗಳಾಗಿದ್ದರು. ಆದ್ದರಿಂದ ಅವರ ಅಂತರಂಗ ಬಹಿರಂಗ ಶುದ್ಧವಾಗಿತ್ತು.
- ಇಂದು ಅನೇಕರಿಗೆ ಬದುಕು ಬರಹ ಸಂಬಂಧವಿಲ್ಲ.
* ಶರಣರಿಗೆ ಸಾಹಿತ್ಯ ಬರೆವ ಉದ್ದೇಶವಿರಲಿಲ್ಲ. ಧರ್ಮ ಕಟ್ಟುವ ಉದ್ದೇಶವಿರಲಿಲ್ಲ. ಉತ್ತಮ ಮನುಷ್ಯರ ಉತ್ತಮ ಸಮಾಜ ಕಟ್ಟುವಾಗ ಸಾಹಿತ್ಯ ಧರ್ಮ ಉಪೋತ್ಪಾದನೆಗಳಾಗಿ ಹುಟ್ಟಿಕೊಂಡಿವೆ. ಆದ್ದರಿಂದ ಸಾಮಾಜಿಕ ಬದ್ಧತೆ ಪ್ರಾಯೋಗಿಕ ತಿಳುವಳಿಕೆ ಅನುಭವದ ದ್ರವ್ಯ ಅವುಗಳಲ್ಲಿವೆ. ಬದುಕೇ ಒಂದು ಹಾಡು.
- ಕಾವ್ಯ ಒಂದು ಸಾಹಿತ್ಯ ರೂಪವಾಗಿದ್ದು ಅದು ಪದ ಸಮೂಹವಾಗಿರುತ್ತದೆ. (ಶಬ್ದಾರ್ಥ ಸಹಿತೌ ಕಾವ್ಯಂ....) ನಿದರ್ಿಷ್ಟ ವಸ್ತು ವಿಷಯ ಒಳಗೊಂಡಿರುತ್ತದೆ. ನೈಜ ಜೀವನದಿಂದ ಹೊರಗಿರಬಹುದು (ಕವಿ ಸಮಯ). ಹಾಗಾಗಿ ಅನುಭವ ಜನ್ಯವಿರದೇ ವಚನಗಳಾಗಲಾರವು.
* ಒಕ್ಕಲಿಗ ಮುದ್ದಣ್ಣ, ಅಂಬಿಗರ ಚೌಡಯ್ಯ ಮೊದಲಾದ ಕಾಯಕ ಜೀವಿಗಳು ವೃತ್ತಿ ಅನುಭವದಿಂದ ವಚನ ಬರೆದರು.
- ಹೊಲಗಳನ್ನು ನೋಡದವರೂ, ಆಕಳಿಗೂ ಎತ್ತಿಗೂ ವ್ಯತ್ಯಾಸ ತಿಳಿಯದವರೂ ರೈತರ ಅತ್ಮಹತ್ಯೆ ಕುರಿತು ಬರೆಯುವರು.
* ವಚನಗಳು ಅನುಭಾವ ಜನ್ಯ.
- ಆಧುನಿಕ ಕಾವ್ಯ ಶಬ್ದ ಜಾಲ.
* ಶರಣರು ವೇದೋಪನಿಷತ್ತು, ಮನುಪ್ರಣಿತ ಧರ್ಮ, ದೇವಾಲಯ, ದೇವರು, ಪುನರ್ಜನ್ಮ, ಕರ್ಮಸಿದ್ಧಾಂತ, ಜ್ಯೋತಿಷ್ಯ, ಹಣೆಬರಹ, ಜಾತಿ,ಮತ, ಪಂಥ, ವರ್ಗ, ವರ್ಗಭೇದ, ಸಾರಸಗಟಾಗಿ ನಿರಾಕರಿಸಿದ ಶರಣರು ಬರಿ ಹೇಳಲಿಲ್ಲ ಬದುಕಿ ತೋರಿದರು.
- ಪ್ರಜಾಪ್ರಭುತ್ವ ವ್ಯವಸ್ಥೆ ಮಧ್ಯೆ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಮಧ್ಯದಲ್ಲಿರುವ, ಇವೆಲ್ಲ ಪಾಲಿಸುತ್ತಲೆ ವೇದಿಕೆ ಶೂರರಾಗಿ ಹೇಳುತ್ತಲೇ ವಚನ ಪಾರಾಯಣದಿಂದ ಕರ್ಮ ಫಲಿಸುವ ಕುರಿತು ಹೇಳುವುದು. ಜೀವನ ತತ್ವಗಳನ್ನು ಎಲ್ಲಾ ಕರ್ಮ ತತ್ವಗಳಿಗೆ ಅನ್ವಯಿಸುವುದು ವಚನ ಸಾಹಿತ್ಯದ ಕೊಲೆಯಾಗುತ್ತದೆ.
 ಹದಿನೈದನೇ ಶತಮಾನದ ವಚನಕಾರರೆಂದು ಕರೆಸಿಕೊಳ್ಳುವ ಬಹುತೇಕ ವಚನಕಾರರು ವೇದಪ್ರಾಮಾಣ್ಯ, ಪುನರ್ಜನ್ಮ ಸ್ವೀಕರಿಸಿದ್ದಾರೆ. (ಷಣ್ಮುಖಶಿವಯೋಗಿ ಇದಕ್ಕೆ ಅಪವಾದ) ಅನೇಕರಿಗೆ ಸೈದ್ಧಾಂತಿಕ ಸ್ವಷ್ಟತೆಇಲ್ಲ. ಅನೇಕರು ಪವಾಡಗಳನ್ನು ಬಿತ್ತರಿಸಿದ್ದಾರೆ. ವಚನಕಾರರ ನಂತರ ಬಂದ ಬಹುತೇಕರು ಕಾಯಕಜೀವಿಗಳಲ್ಲ. (ಕಾಯಕವೆಂದರೆ ಸತ್ಯಶುದ್ಧತೆ ಹೊಂದಿರಬೇಕು, ಭ್ರಷ್ಟಾಚಾರಿಗಳಾಗಿರಬಾರದು, ಹೆಚ್ಚು ಆದಾಯ ಪಡೆಯಬಾರದು, ಉಳಿದದ್ದು ಸಮಾಜಕ್ಕೆ  (ದಾಸೋಹ) ವಿನಿಯೋಗಿಸಬೇಕು.
* ಶರಣರಿಗೆ ಕಾಯಕ ಸಿದ್ಧಾಂತದ ಸಾಮಾಜಿಕ ಬದ್ಧತೆ ಇತ್ತು. ಹಾಗಾಗಿ ಬದುಕುವುದಕ್ಕಾಗಿ ವಚನ ಬರೆದರು.
- ಬರೆಯುವುದಕ್ಕಾಗಿ ವಚನ ರಚನೆಗಳಿವೆ.
 ಈ ಎಲ್ಲಾ ಕಾರಣಗಳಿಂದ ಆಧುನಿಕ ವಚನಗಳು ವಚನಗಳಲ್ಲ. ವಚನ ರಚನೆಗಳಾಗುತ್ತವೆ. ಆಧುನಿಕ ವಚನಕಾರರು ವಚನಕಾರರಲ್ಲ. ವಚನ ರಚನೆಕಾರರಾಗುತ್ತಾರೆ. ಈ ನಿಟ್ಟಿನಲ್ಲಿ ಸಾತ್ವಿಕ ಚಚರ್ೆಯ ನಿರ್ಣಯದ ಅಗತ್ಯವಿದೆ ಎಂದು ಭಾವಿಸಿದ್ದೇನೆ.
- ಡಾ. ಬಸವರಾಜ ಬಲ್ಲೂರು

 

1 comment: